ಪದ್ಮರಸ:-
1599. ಜೈನಕವಿ. ಶೃಂಗಾರ ಕಥೆ ಎಂಬ ಸಾಂಗತ್ಯ ಕಾವ್ಯವನ್ನು ಬರೆದಿದ್ದಾನೆ. ಈತ ಮೈಸೂರು ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನಲ್ಲಿರುವ ಕೆಲಸೂರು ಗ್ರಾಮದವ. ಜೈನ ಪರಂಪರೆಯಲ್ಲಿ ಇದಕ್ಕೆ ಛತ್ರತ್ರಯಪುರ (ಮುಕ್ಕೊಡೆಯೂರು) ಎಂಬ ಹೆಸರೂ ಇದೆ. ತಂದೆ ಪದ್ಮಕೋಪಾಧ್ಯಾಯ. ಗುರು ಭಟ್ಟಾಕಲಂಕ.

	5 ಸಂಧಿ 533 ಪದ್ಯಗಳಿರುವ ತನ್ನ ಕಾವ್ಯವನ್ನು 1599ರಲ್ಲಿ ಕೆಲಸೂರಿನ ಚಂದ್ರನಾಥ ಬಸದಿಯಲ್ಲಿ ಬರೆದುದಾಗಿ ಕವಿ ಹೇಳಿಕೊಂಡಿದ್ದಾನೆ. ಕವಿಯ ಕಾಲನಿರ್ದೇಶನಕ್ಕೆ ಇದು ಉಪಯುಕ್ತ ಆಧಾರ. ಈತನ ಇನ್ನಿತರ ಕಾವ್ಯಗಳು ತಿಳಿಯವು. ಈ ಕಾವ್ಯದ ಸ್ವಾರಸ್ಯಗಳಲ್ಲಿ ಕೆಲವು ಗಮನಾರ್ಹವಾಗಿವೆ. ಪದ್ಮರಸ ಜೈನಕವಿಯಾದರೂ ಕಾವ್ಯದ ಪ್ರಾರಂಭದಲ್ಲಿ ಶಿವನನ್ನು ಸ್ತುತಿಸಿದ್ದಾನೆ. ಇದರಿಂದ ಬಹುಶಃ ಜೈನೇತರ ಆಶ್ರಯದಾತನಿಗಾಗಿ ಈ ಕಾವ್ಯ ರಚಿತವಾಗಿದ್ದಿರಬಹುದೆಂದು ಊಹಿಸಬಹುದು. ತನ್ನ ಕಾವ್ಯವನ್ನು ಪಾಪನಾಶಕ್ಕಾಗಿ ಹೇಳಿದ ಪುಣ್ಯಸಾರ ಸತ್ಕಥೆಯಲ್ಲವೆಂದು ಕೇವಲ ಆಸರು ಪರಿಹಾರವಾಗಿ ಪೇಳಿದ ಕೃತಿಯೆಂದೂ ಕವಿ ಗ್ರಂಥಾದಿಯಲ್ಲಿ ಅರಿಕೆ ಮಾಡಿಕೊಂಡಿರುವುದು ಸ್ವಾರಸ್ಯವಾಗಿದೆ. ಮುಖ್ಯವಾಗಿ ಕವಿ ರತ್ನಾಕರವರ್ಣಿಯ ಜಾಡು ಹಿಡಿದಿದ್ದಾನೆ. ಆತನ ಭರತೇಶ ವೈಭವವೇ ಈತನ ಶೃಂಗಾರ ಕಥೆಗೆ ಪ್ರೇರಕ, ಪೂರಕ, ಪೋಷಕ ಹಾಗೂ ಮಾರ್ಗದರ್ಶಕ. ಕನ್ನಡನಾಡಿನ ಸುಖನಿಲಯಪುರದ ದೊರೆ ರತ್ನಭೂಷಣ, ರಾಣಿ ಗುಣಭೂಷಣಿ, ಇವರ ಮಗ ಸುಕುಮಾರ-ಇವರ ಕಥೆಯೇ ಶೃಂಗಾರಕಥೆ ಕಾವ್ಯದ ತಿರುಳು.  ಇಲ್ಲಿ ಘಟನೆಗಳು ಕಡಿಮೆಯಿದ್ದರೂ ವರ್ಣನೆಗಳು ಶೃಂಗಾರಪೂರ್ಣವಾಗಿ ಕಲಾವಂತಿಕೆಯಿಂದ ಹೃದ್ಯವಾಗಿವೆ. ಕೆಲವು ಶೃಂಗಾರ ಚಿತ್ರಗಳಂತೂ ನೆನಪಿನ ನಾಲಗೆಯ ಮೇಲೆ ಬಹುಕಾಲ ನರ್ತಿಸುತ್ತವೆ. ಈ ಪುಟ್ಟ ಕಾವ್ಯ ಅಚ್ಚುಕಟ್ಟಾದ ಒಂದು ಶೃಂಗಾರ ಚಿತ್ರಶಾಲೆಯಂತಿದೆ. ಇಲ್ಲಿ ಬರುವ ಖಂಡಪ್ರಾಸದ ಲಯವಂತಿಕೆ ಆಯಾ ಪದ್ಯದ ಅರ್ಥವಂತಿಕೆಯನ್ನು ಅಭಿನಯ ಮಾಡುವಂತೆ ಸಾರ್ಥಕವಾಗಿದೆ.     (ಎಚ್.ಪಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ